ಗ್ಲಿಪ್ಟೊಡಾನ್ -
ಈಡೆಂಟೇಟ ಗಣದ ಆರ್ಮಡಿಲೊ ಪ್ರಾಣಿಗಳ ಸಂಬಂಧಿಯಾದ ಮತ್ತು ಅವುಗಳ ಮೂಲಪ್ರಾಣಿಯೆನಿಸಿದ ಒಂದು ಬೃಹತ್‍ಗಾತ್ರದ ಸ್ತನಿ. ಗ್ಲಿಪ್ಟೊಡಾಂಟಿಯ ಗಣಕ್ಕೆ ಸೇರಿದೆ. ಇದು ದಕ್ಷಿಣ ಮತ್ತು ಉತ್ತರ ಅಮೆರಿಕಗಳ ಮರಳುಗಾಡುಗಳಲ್ಲಿ ಟರ್ಷಿಯರಿ ಹಾಗೂ ಪ್ಲೀಸ್ಟೊಸೀನ್ ಅವಧಿಗಳಲ್ಲಿ ಜೀವಿಸಿತ್ತು. ಈಗ ಇದರ ಫಾಸಿಲುಗಳು ಮಾತ್ರ ಕಾಣಸಿಕ್ಕಿವೆ.

ಆಮೆಗಳಂತೆ ಇದಕ್ಕೂ ಬೆನ್ನ ಮೇಲೆ ಕೊಂಬಿನಿಂದ ರಚಿತವಾದ 6 ದೊಡ್ಡ ಫಲಕಗಳು ಮತ್ತು ಅಸಂಖ್ಯಾತ ಚಿಕ್ಕಫಲಕಗಳಿಂದ ಕೂಡಿದ ಗಟ್ಟಿಕವಚವಿತ್ತು. ತಲೆ ಬರುಡೆ ಚಿಕ್ಕದಾಗಿತ್ತು. ದೊಡ್ಡ ಬಾಯಿ ಮತ್ತು ಅರಗೊಳವಿಯಾಕಾರದ ಹಲ್ಲುಗಳಿದ್ದುವು. ತಲೆಬುರುಡೆಯ ಮೇಲೂ ಗಟ್ಟಿಯಾದ ಒಂದು ಅಸ್ಥಿಕವಚವಿತ್ತು. ಬಾಲ ಕೂಡ ಉಂಗುರಗಳಂಥ ಅನೇಕ ರಚನೆಗಳಿಂದ ಆವೃತವಾಗಿತ್ತು. ಕತ್ತು ದೇಹದೊಡನೆ ವಿಚಿತ್ರ ರೀತಿಯಲ್ಲಿ ಬಂಧಿತವಾಗಿದ್ದು ಆಮೆಗಳ ಕತ್ತಿನಂತೆ ಕವಚದೊಳಕ್ಕೆ ಎಳೆದುಕೊಳ್ಳಲು ಸಾಧ್ಯವಾಗುವಂತಿತ್ತು. ಕಾಲುಗಳು ಮೋಟಾಗಿಯೂ ದೃಢವಾಗಿಯೂ ಇದ್ದುವಲ್ಲದೆ ಕಾಲ್ಬೆರಳುಗಳಲ್ಲಿ ನಖಗಳಿಗೆ ಬದಲಾಗಿ ಗೊರಸುಗಳಿದ್ದವು.

ಉತ್ತರ ಅಮೆರಿಕಾದಲ್ಲಿ ಜೀವಿಸಿದ್ದ ಗ್ಲಿಪ್ಟೊಡಾನ್ ಮತ್ತು ಗ್ಲಿಪ್ಟೊಥೀರಿಯಮ್ ಎಂಬ ಬಗೆಗಳಲ್ಲಿ ಮುಂಗಾಲಿನಲ್ಲಿ 4 ಬೆರಳುಗಳು ಹಿಂಗಾಲಿನಲ್ಲಿ 5 ಬೆರಳುಗಳೂ ಇದ್ದವು. ದಕ್ಷಿಣ ಅಮೆರಿಕದಲ್ಲಿದ್ದ ಡೀಡಿಕ್ಯೂರಸ್ ಎಂಬುದರಲ್ಲಿ ಮುಂಗಾಲಿನಲ್ಲಿ 3 ಮತ್ತು ಹಿಂಗಾಲಿನಲ್ಲಿ 4 ಬೆರಳುಗಳಿದ್ದವು. ಅಲ್ಲದೆ ಇದರ ಬಾಲದ ಮೇಲೆ ಕೊಂಬಿನಿಂದ ರಚಿತವಾದ ಮುಳ್ಳುಗಳಿದ್ದವು.
(ಕೆ. ಎಂ. ವಿ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ